ಸಕಲೇಶಪುರ
	ಭಾರತದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. 19ನೆಯ ಶತಮಾನದ ಪ್ರಾರಂಭದಲ್ಲಿ ಹಾಸನ ಜಿಲ್ಲೆಗೆ ಸೇರಿದ ಹಾಗೆ ಸಕಲೇಶಪುರ ಭಾಗ ಮಂಜರಾಬಾದು ಫೌಜುದಾರಿ ಆಡಳಿತದ ವಿಭಾಗವಾಗಿತ್ತು. 1832ರಲ್ಲಿ ಇದನ್ನು ಅಷ್ಟಗ್ರಾಮ ಸಬ್‍ಡಿವಿಜನ್ನಿಗೆ ಸೇರಿಸಲಾಯಿತು. 1882ರಲ್ಲಿ ಹಾಸನದ ಬಹುಭಾಗ ಕಡೂರು ಜಿಲ್ಲೆಗೆ ಸೇರಿಹೋಗಿ, ಅರಸೀಕೆರೆ, ಬೇಲೂರು ಸಬ್ ತಾಲ್ಲೂಕು ಸೇರಿ ಹಾಸನ ಮತ್ತು ಮಂಜರಾಬಾದ್ ತಾಲ್ಲೂಕುಗಳು ಮಾತ್ರ ಹಾಸನ ಜಿಲ್ಲೆಯ ತಾಲ್ಲೂಕುಗಳಾದವು.  ಸಕಲೇಶಪುರ ಆಡಳಿತ ಕೇಂದ್ರವಾಗಿದ್ದ ತಾಲ್ಲೂಕಿಗೆ  ಮಂಜರಾಬಾದ್ ತಾಲ್ಲೂಕು ಎಂಬ ಹೆಸರಿತ್ತು. ಜಿಲ್ಲೆಯ ಪಶ್ಚಿಮಕ್ಕಿರುವ ಈ ತಾಲ್ಲೂಕನ್ನು ದಕ್ಷಿಣ ಮತ್ತು ಆಗ್ನೇಯದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು, ಪೂರ್ವಕ್ಕೆ ಆಲೂರು ತಾಲ್ಲೂಕು, ಉತ್ತರ ಮತ್ತು ಈಶಾನ್ಯಕ್ಕೆ ಬೇಲೂರು ತಾಲ್ಲೂಕು ವಾಯವ್ಯ ಮತ್ತು ಉತ್ತರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು, ಪಶ್ಚಿಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಪುತ್ತೂರು ತಾಲ್ಲೂಕುಗಳು, ನೈಋತ್ಯದ ಸ್ವಲ್ಪಭಾಗಕ್ಕೆ ತಾಗಿದಂತೆ ಸುಳ್ಯ ತಾಲ್ಲೂಕು ಸುತ್ತುವರಿದಿವೆ.  ಹಾನಬಾಳು, ಹೆತ್ತೂರು, ಯಸಳೂರು ಮತ್ತು ಸಕಲೇಶಪುರ ಹೋಬಳಿಗಳು. ಒಂದು ಪಟ್ಟಣ, 227 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 1,029.2 ಚ.ಕಿಮೀ. ಜನಸಂಖ್ಯೆ 1,33,657.

	ಈ ತಾಲ್ಲೂಕು ಜಿಲ್ಲೆಯ ದಕ್ಷಿಣ ಮಲೆನಾಡು ಪ್ರದೇಶದಲ್ಲಿದೆ.  ಈ ಭಾಗದಲ್ಲಿ ಮಳೆ ಹೆಚ್ಚು. ವಾರ್ಷಿಕ ಸರಾಸರಿ ಮಳೆ 2,348ಮಿಮೀ. ಈ ತಾಲ್ಲೂಕು ಪಶ್ಚಿಮಘಟ್ಟ ಶ್ರೇಣಿಯ ಅಂಚಿನಲ್ಲಿದ್ದು ಅರಣ್ಯಗಳಿಂದ ಕೂಡಿದೆ. ತಾಲ್ಲೂಕಿನ ಪಶ್ಚಿಮಕ್ಕೆ ಬಿಸಲೆ ಘಾಟ್ ಶ್ರೇಣಿ ಇದ್ದು ಈ ಪ್ರದೇಶ ಸಮುದ್ರ ಮಟ್ಟದಿಂದ 914 ಮೀ ಎತ್ತರದಲ್ಲಿದೆ. ಈ ತಾಲ್ಲೂಕಿನ ಪಶ್ಚಿಮ, ವಾಯವ್ಯ ಮತ್ತು ದಕ್ಷಿಣದ ಭಾಗಗಳಲ್ಲಿ ಬೆಟ್ಟಗಳು ಹಬ್ಬಿವೆ.  ಕೆಂಚನಕುಮಾರಿ, ಕಬ್ಬಿನಲೆ, ಕೆಂಪುಹೊಳೆ, ಕಾಗಿನೆರಿ ಮತ್ತು ಬಿಸಲೆಘಾಟ್ ತಾಲ್ಲೂಕಿನ ಮುಖ್ಯ ಅರಣ್ಯಗಳು. ಇವುಗಳಲ್ಲಿ ಹೊನ್ನೆ, ನಂದಿ, ಸಂಪಿಗೆ, ಕರಿಮರ, ತೇಗ, ಗಂಧದ ಮರಗಳು ಹೆಚ್ಚು ಬೆಳೆಯುತ್ತವೆ. ಅರಣ್ಯಗಳಲ್ಲಿ ಹುಲಿ, ಚಿರತೆ, ಕರಡಿ, ಸಾರಂಗ, ಕಾಡುಕೋಣ, ನರಿ, ಕಾಡುನಾಯಿ ಮುಂತಾದ ಪ್ರಾಣಿಗಳೂ ಕೋಗಿಲೆ, ಗಿಣಿ, ನವಿಲು, ಕಾಡುಕೋಳಿ, ಜೀವಂಜೀವ ಮೊದಲಾದ ಪಕ್ಷಿಗಳೂ ಅನೇಕ ಜಾತಿಯ ಉರಗಗಳೂ ಇವೆ.

	ಈ ತಾಲ್ಲೂಕಿನ ಮುಖ್ಯನದಿ ಹೇಮಾವತಿ. ಇದು ಅಚ್ಚನಹಳ್ಳಿ ಬಳಿ ಈ ತಾಲ್ಲೂಕನ್ನು ಪ್ರವೇಶಿಸಿ ಸ್ವಲ್ಪದೂರ ಬೇಲೂರು ಮತ್ತು ಆಲೂರು ತಾಲ್ಲೂಕುಗಳ ಗಡಿಯಾಗಿ ತಾಲ್ಲೂಕಿನ ಪೂರ್ವದಲ್ಲಿ ದಕ್ಷಿಣಾಭಿಮುಖ ವಾಗಿ ಹರಿಯುತ್ತದೆ. ಈ ತಾಲ್ಲೂಕಿನ ಮದನಪುರ, ಮಾವಿನ ಹಳ್ಳಿ, ಸಕಲೇಶಪುರ, ಇಬ್ಬದಿ, ವಡ್ಡೂರು, ಕಾಮನಹಳ್ಳಿ, ಬೆಳ್ಳೂರು ಮುಖಾಂತರ ಹರಿಯುವ ಈ ನದಿಗೆ ಐಗೂರ ಬಳಿ ಐಗೂರ ಹೊಳೆ ಕೂಡಿಕೊಳ್ಳುತ್ತದೆ. ಮುಂದೆ ಆಲೂರು ತಾಲ್ಲೂಕಿನ ದಕ್ಷಿಣದಲ್ಲಿ ಕೊಡಗು ಜಿಲ್ಲೆಯ ಗಡಿಯಾಗಿ ಸ್ವಲ್ಪದೂರ ಹರಿದು ಅರಕಲಗೂಡು ತಾಲ್ಲೂಕನ್ನು ಪ್ರವೇಶಿಸುವುದು. ಈ ತಾಲ್ಲೂಕಿನ ಹೆಚ್ಚು ಭಾಗದಲ್ಲಿ ಮೇಲೆ ಕೆಂಪು ಒಳಗೆ ಕೆಂಪುಮಿಶ್ರಿತ ಹಳದಿ ಬಣ್ಣದ ಮಣ್ಣಿನ ಭೂಮಿ ಇದ್ದು ನೆಡುತೋಪಿಗೆ ಬಹು ಪ್ರಶಸ್ತ ಪ್ರದೇಶವಾಗಿದೆ. ಬತ್ತ, ಏಲಕ್ಕಿ, ಕಾಫಿ-ಇವು ತಾಲ್ಲೂಕಿನ ಮುಖ್ಯ ಬೆಳೆಗಳು. ಇವುಗಳ ಜೊತೆಗೆ ಟೀ, ಅಡಕೆ ಮತ್ತು ಗೋಡಂಬಿ ಬೆಳೆಯುತ್ತಾರೆ ; ಬಾಳೆಹಣ್ಣು, ಕಿತ್ತಲೆಹಣ್ಣುಗಳ ಬೆಳೆಯೂ ಇದೆ. ಜೇನು ಸಾಕಣೆಗೆ ಪ್ರಸಿದ್ಧ.

	ಹೇಮಾವತಿ ನದಿಗೆ ಅಡ್ಡಲಾಗಿ ಸಕಲೇಶಪುರದ ಬಳಿ ದೊಡ್ಡ ಸೇತುವೆ ಕಟ್ಟಲಾಗಿದೆ. ಬಿಸಲೆ ಘಾಟ್ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಈ ತಾಲ್ಲೂಕಿನ ಮುಖಾಂತರ ಹೋಗಬೇಕಾಗಿದ್ದು ಸಕಲೇಶಪುರ ಅದರ ಪ್ರವೇಶದ್ವಾರದಂತಿದೆ. ಹಾಸನ-ಮಂಗಳೂರು ರೈಲ್ವೆ ಮಾರ್ಗ ಈ ತಾಲ್ಲೂಕು ಮುಖಾಂತರವೇ ಹಾದುಹೋಗುತ್ತದೆ.

	ಈ ತಾಲ್ಲೂಕಿನ ಮುಖ್ಯ ಸ್ಥಳಗಳಲ್ಲಿ ಮಂಜರಾಬಾದು ಒಂದು.  ಇಲ್ಲಿ ಒಂದು ಕೋಟೆ ಇದೆ. ಬಿಸಲೆ ಘಾಟ್ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆಯ ನಡುವಣ ಕಣಿವೆ ಪ್ರದೇಶ, ಹಾಸನಕ್ಕೆ 105 ಕಿಮೀ ದೂರದಲ್ಲಿದೆ.  ಸಕಲೇಶಪುರಕ್ಕೆ 6 ಕಿಮೀ ದೂರದಲ್ಲಿರುವ ಹಳೆಬೇಲೂರಿನಲ್ಲಿ ಹೊಯ್ಸಳರ ಕಾಲದ ಚೆನ್ನಕೇಶವ ದೇವಾಲಯವಿದೆ. ಕದಂಬರ ಕಾಲದ ವಾಮದೇವ ವಿಗ್ರಹವೊಂದು ಸಹ ಇಲ್ಲಿದೆ. ಸಕಲೇಶಪುರಕ್ಕೆ ಸು.38 ಕಿಮೀ ದೂರದಲ್ಲಿರುವ ಯಡೆಕುಮರಿ ಗ್ರಾಮಕ್ಕೆ ಸಮೀಪದ ಬೆಟ್ಟಗಳಲ್ಲಿ ಹಾಸನ-ಮಂಗಳೂರು ರೈಲುಮಾರ್ಗ ರಚನೆಯ ಸಂಬಂಧದಲ್ಲಿ ಮೂರು ದೊಡ್ಡ ಸುರಂಗಗಳನ್ನು ಕೊರೆಯಲಾಗಿದೆ. ಈಗ ಇದು ಬ್ರಾಡ್‍ಗೇಜಾಗಿ ಪರಿವರ್ತನೆಗೊಳ್ಳುತ್ತಿದೆ. ತಾಲ್ಲೂಕಿನ ಪ್ರಮುಖ ರಸ್ತೆಗಳು ಸಕಲೇಶಪುರ ದಿಂದ ಹಾಸನ, ಮೂಡಿಗೆರೆ, ಆಲೂರು, ಅರಕಲಗೂಡು, ಮಂಗಳೂರು ಮೊದಲಾದ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಸಕಲೇಶಪುರ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ.  ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಹಾಸನಕ್ಕೆ ಪಶ್ಚಿಮದಲ್ಲಿ 40 ಕಿಮೀ ದೂರದಲ್ಲಿ ಹೇಮಾವತಿ ನದಿಯ ಬಲದಂಡೆಯ ಮೇಲಿದೆ.  ಜನಸಂಖ್ಯೆ 23,201. ಸಮುದ್ರಮಟ್ಟದಿಂದ 899 ಮೀ ಎತ್ತರದಲ್ಲಿರುವ ಈ ಪಟ್ಟಣ ತಂಪಾದ ಹವಾಗುಣ ಹೊಂದಿದೆ. ಏಲಕ್ಕಿ ಮತ್ತು ಕಾಫಿ ಬೆಳೆಗಳಿಗೆ ಇದೊಂದು ಪ್ರಸಿದ್ಧ ವ್ಯಾಪಾರ ಕೇಂದ್ರ. ಬೆಂಗಳೂರಿಗೆ 222 ಕಿಮೀ ದೂರದಲ್ಲೂ ಮಂಗಳೂರು ನಗರಕ್ಕೆ 136 ಕಿಮೀ ದೂರದಲ್ಲೂ ಇರುವ ಈ ಪಟ್ಟಣ ಹಾಸನ-ಮಂಗಳೂರು ರೈಲ್ವೆಮಾರ್ಗದ ಒಂದು ಪ್ರಮುಖ ನಿಲ್ದಾಣ. ನದಿ ದಡದಲ್ಲಿರುವ ಸಕಲೇಶ್ವರ ದೇವಾಲಯದಿಂದ ಈ ಪಟ್ಟಣಕ್ಕೆ ಸಕಲೇಶಪುರವೆಂಬ ಹೆಸರು ಬಂತೆಂದು ಪ್ರತೀತಿ.	

	(ಪಿ.ಜಿ.ಡಿ.; ಡಿ.ಸಿ.ಜೆ.; ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ